ಚಾಟು ಕವಿತ್ವ-
ಚಾಟು ಎಂದೆ ಪ್ರಿಯವಾದದ್ದು ಎಂದು ಅರ್ಥ. ಪ್ರಿಯವಾದ ಅರ್ಥವುಳ್ಳ ಪದ್ಯಗಳು ಚಮತ್ಕಾರಯುಕ್ತವಾಗಿಯೂ ಇದ್ದರೆ ಸಹಜವಾಗಿ ಪಂಡಿತರ ಮನಸ್ಸಿಗೆ ವಿಶೇಷ ಆಹ್ಲಾದವನ್ನುಂಟುಮಾಡುತ್ತವೆ. ಅವನ್ನು ಅವರು ಇತರರಿಗೂ ಹೇಳಿ ಸ್ವಾರಸ್ಯವನ್ನು ವಿವರಿಸುತ್ತಾರೆ. ಹೀಗೆಯೇ ಅವು ಒಬ್ಬರಿಂದ ಒಬ್ಬರಿಗೆ ಹರಡಿ ಲೋಕಪ್ರಸಿದ್ಧವಾಗುತ್ತವೆ. ಅಂಥ ಪದ್ಯ ಕಟ್ಟುವಿಕೆಯನ್ನು ಚಾಟು ಕವಿತ್ವವೆನ್ನುತ್ತಾರೆ. ಸಂಸ್ಕøತ ಭಾಷೆಯಲ್ಲಿ ಚಾಟು ಶ್ಲೋಕಗಳು ಅಸಂಖ್ಯಾತವಾಗಿವೆ. ಅವನ್ನು ಸುಭಾಷಿತಗಳೆಂದೂ ಕರೆಯುತ್ತಾರೆ. ಕವಿಗಳು ಹೇಳಿದ ಉತ್ತಮ ಪದ್ಯಗಳೆಂದು ಆ ಮಾತಿಗೆ ಅರ್ಥ. ಬಹುಮಟ್ಟಿಗೆ ಇಂಥ ಶ್ಲೋಕಗಳು ಆಶುಕವಿತೆಗಳು. ಕವಿಗಳು ಯಾವುದೋ ಸನ್ನಿವೇಶದಲ್ಲಿ ಸ್ಫೂರ್ತಿಯಿಂದ ಹೇಳಿದ ಸರಸವಾದ ಪದ್ಯಗಳು ಇವು. ಈ ಪದ್ಯಗಳಲ್ಲಿ ಕವಿಯ ಹೃದಯಾಂತರಾಳದ ತೀವ್ರ ಸಂತೋಷ, ದುಃಖ, ಕೋಪ, ತಿರಸ್ಕಾರಾದಿ ವ್ಯಕ್ತವಾಗುತ್ತವೆ. ಜೀವನದ ಹಲವು ಘಟನಾವಳಿಗಳನ್ನು ಗಮನಿಸಿದ ಕವಿಗಳ ಮನಸ್ಸಿನಲ್ಲಿ ಮೂಡಿದ ಸಂವೇದನೆ ಈ ಪದ್ಯಗಳಲ್ಲಿ ಸುವ್ಯಕ್ತವಾಗುವುದರಿಂದ ಅವು ಕೇಳುಗರ ಹೃದಯವನ್ನು ನಲಿಸುತ್ತವೆ; ಅವರ ಮನಸ್ಸನ್ನು ಅರಳಿಸುತ್ತವೆ. ಸಾಮಾನ್ಯವಾಗಿ ಚಾಟು ಪದ್ಯಗಳು ಸ್ವಸಂಪೂರ್ಣವಾದ ಅರ್ಥವುಳ್ಳ ಬಿಡಿ ಪದ್ಯಗಳಾಗಿರುತ್ತವೆ.

	ಲೋಕಪ್ರಸಿದ್ಧವಾದ ಇಂಥ ಅನೇಕ ಕವನಗಳಿಗೆ ಕರ್ತೃಗಳು ಯಾರೋ ತಿಳಿಯದು. ಆದರೆ ಶ್ಲೋಕಗಳು ಮಾತ್ರ ರಸಿಕ ಶ್ರೋತೃಗಳ ಹೃದಯ ಸಿಂಹಾಸನದಲ್ಲಿ ಸುಪ್ರತಿಷ್ಠವಾಗಿವೆ. ಬೇರೆ ಕೆಲವು ಪದ್ಯಗಳ ಕವಿಗಳು ಯಾರೆಂಬುದು ತಿಳಿದಿದೆ. ದೊಡ್ಡ ದೊಡ್ಡ ಕಾವ್ಯಗಳನ್ನು ರಚಿಸಿದ ಮಹಾಕವಿಗಳೂ ಕೆಲವು ವೇಳೆ ಹಾಸ್ಯಪೂರ್ಣವಾದ ಪದ್ಯಗಳನ್ನು ಹೇಳುವುದು ಅಸಂಭವವೇನೂ ಅಲ್ಲ. ತೆಲುಗಿನ ಶ್ರೀನಾಥ, ಅಲ್ಲಸಾನಿ ಪೆದ್ದನ, ಕೃಷ್ಣದೇವರಾಯ, ತೆನಾಲಿ ರಾಮಕೃಷ್ಣ ಮೊದಲಾದ ಹಿರಿಯ ಕವಿಗಳು ಸಮಯಸ್ಫೂರ್ತಿಯಿಂದ ಹೇಳಿದ ಹಲವು ಆಶುಕವಿತೆಗಳು ತೆಲುಗು ದೇಶದಲ್ಲಿ ವಿಶೇಷ ಜನಪ್ರಿಯತೆ ಗಳಿಸಿವೆ. ಇವು ಆ ಕವಿಗಳ ಜೀವನದ ಪ್ರಮುಖ ಘಟನೆಗಳ ವರ್ಣನೆಗಳಾಗಿರುವುದೂ ಉಂಟು. ತನ್ನ ಆಶ್ರಯದಾತನಾದ ಕೃಷ್ಣದೇವರಾಯ ಸ್ವರ್ಗಸ್ಥನಾದ ಮೇಲೂ ಕೊಂಚಕಾಲ ಜೀವಿಸಿದ್ದ ಪೆದ್ದನಾರ್ಯ ಹೇಳಿರುವ ಎರಡು ಸೀಸಪದ್ಯಗಳು ಇತಿಹಾಸಪ್ರಸಿದ್ಧವಾಗಿವೆ. ಅವು ಚಾಟುಪದ್ಯಗಳ ಜಾತಿಗೇ ನಾಯಕರತ್ನಗಳಂತೆ ಶೋಭಿಸುತ್ತಿವೆ. ಅವರ ನಿಕಟ ಸ್ನೇಹದ ಪ್ರತ್ಯಕ್ಷದರ್ಶನ ಆ ಪದ್ಯಗಳಲ್ಲಿ ಲಭಿಸುತ್ತದೆ. ವಾರ್ಧಕ್ಯದಲ್ಲಿ ದಾರಿದ್ರ್ಯಕ್ಕೆ ಸಿಕ್ಕಿ ಕಷ್ಟಪಟ್ಟ ಶ್ರೀನಾಥನ ಕ್ಲೇಶ ಆತ ಹೇಳಿಕೊಂಡಿರುವ ಪದ್ಯಗಳಲ್ಲಿ ವ್ಯಕ್ತವಾಗಿದೆ. ಇಂಥ ಅನೇಕ ಚಾಟುಕವಿತೆಗಳು ಕವಿಗಳ ಆತ್ಮಕಥೆಗಳಾಗಿವೆಯೆಂದರೆ ತಪ್ಪಲ್ಲ.

	ಕವಿಗಳು, ರಾಜ, ಮಂತ್ರಿ, ಶ್ರೀಮಂತ ಮೊದಲಾದವರಿಂದ ಮನ್ನಣೆ ಪುರಸ್ಕಾರಗಳನ್ನು ಪಡೆದು ಸಂತೋಷಿಸಿ ಅವರನ್ನು ಹೊಗಳಿ ಹೇಳಿದ ಪದ್ಯಗಳು ಈ ಚಾಟು ಕವಿತಾ ಭಂಡಾರದ ಒಂದು ಭಾಗ. ತಾವು ಬಯಸಿದ ಪುರಸ್ಕಾರ ಲಭಿಸದೆ ನಿರಾಶೆಗೊಂಡ ಕವಿಗಳು ಕೋಪದಿಂದ ರಾಜಾದಿಗಳನ್ನು ಆಕ್ಷೇಪಿಸಿ ಬೈದು ಹೇಳಿದ ಪದ್ಯಗಳದ್ದು ಎರಡನೆಯ ಭಾಗ. ತೆಲುಗಿನಲ್ಲಿ ಇದಕ್ಕೆ ಬೈಗಳ ಕವಿತ್ವ (ತಿಟ್ಟು ಕವಿತ್ವ) ಎಂದೇ ಹೆಸರು. ವೇಮುಲವಾಡ ಭೀಮಕವಿ ಈ ಕ್ಷೇತ್ರದಲ್ಲಿ ಮೇಟಿಯಾದವ. ಇನ್ನೂ ಅನೇಕರು ಈ ಬಗೆಯ ಪದ್ಯಗಳನ್ನು ಕಟ್ಟಿ ಹಾಡಿದ್ದಾರೆ. ಈ ಬೈಗಳ ಪದ್ಯಗಳಲ್ಲಿಯೂ ಕವಿಯ ಉಕ್ತಿಚಮತ್ಕಾರ ಪ್ರಶಂಸಾರ್ಹವಾಗಿರುತ್ತದೆ.

	ಮೂರನೆಯ ಬಗೆಯ ಪದ್ಯಗಳೆಂದರೆ ವ್ಯಂಗ್ಯೋಕ್ತಿಗಳು. ಪ್ರಬಲರನ್ನು ನೇರವಾಗಿ ಖಂಡಿಸುವುದು ದುರ್ಬಲನಿಗೆ ಕ್ಷೇಮವಿಲ್ಲ. ಆದರೆ ಆ ದುಷ್ಟರ ದುರಾಚಾರಗಳನ್ನು ಸಹಿಸಿಕೊಂಡು ಸುಮ್ಮನಿರುವುದೂ ಸಾಧ್ಯವಿಲ್ಲ. ಅಂಥ ಸಂದರ್ಭಗಳಲ್ಲಿ ಕವಿಗಳು ಅನ್ಯೋಕ್ತಿಗಳನ್ನು ಬಳಸುತ್ತಾರೆ. ರಾಜನ ಸಮೀಪವರ್ತಿಯೊಬ್ಬ ನೀಚನಾಗಿ ಸಜ್ಜನಕಂಟಕನಾದಾಗ ಒಬ್ಬ ಕವಿ ಅವನನ್ನು ಒಂದು ಉಮ್ಮತಿ ಹೂವಿಗೆ ಹೋಲಿಸಿದ್ದಾನೆ. ಆ ಹೂವು ಶಿವಲಿಂಗದ ಮೇಲೆ ಇರುವುದರಿಂದ ಅದಕ್ಕೆ ಪೂಜ್ಯತೆ. ಇಲ್ಲದಿದ್ದರೆ ಅದನ್ನು ಮೋಹಿಸುವವರು ಯಾರು? ಅದರಲ್ಲೇನು ಆಕರ್ಷಕವಾದ ಪರಿಮಳವೇ, ವರ್ಣಶೋಭೆಯೇ, ಏನಿದೆ? ಯಾವ ಗುಣವೂ ಇಲ್ಲದ ಈ ಉಮ್ಮತಿ ಹೂ ತಾನು ಅಕಸ್ಮಾತ್ ಒಂದು ದೊಡ್ಡ ಸ್ಥಾನವನ್ನು ಸೇರಿದ ಮಾತ್ರಕ್ಕೆ ಜಂಬ ಮಾಡಬಹುದೆ? ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ತನ್ನನ್ನು ನಿರ್ಮಾಲ್ಯವೆಂದು ಹೆಸರಿಟ್ಟು ದೂರ ಎಸೆಯುವರೆಂಬ ಪ್ರಜ್ಞೆ ಅದಕ್ಕೆ ಇರಬೇಡವೇ? ಧನ್ಯಾನಿ ಸ್ಥಲವೈಭವೇನ ಕತಿಚಿದ್ವಸ್ತೂನಿ ಎಂಬ ಸಂಸ್ಕøತ ಶ್ಲೋಕವನ್ನು ಇಲ್ಲಿ ನೆನಸಿಕೊಳ್ಳಬಹುದು. ಇಂಥ ವ್ಯಂಗ್ಯೋಕ್ತಿಗಳು ಸಂಸ್ಕøತದಲ್ಲಿಯೂ ತೆಲುಗಿನಲ್ಲಿಯೂ ವಿಶೇಷವಾಗಿ ಪ್ರಸಿದ್ಧವಾಗಿವೆ.

	ಇನ್ನು ಕವಿಗಳು ತಾವು ಕಂಡ ದೇಶ, ನಗರಗಳನ್ನೂ ಜನರನ್ನೂ ವರ್ಣಿಸುವ ಪದ್ಯಗಳು ಹಲವು ಚಾಟುಪದ್ಯಗಳಾಗಿ ಪ್ರಸಿದ್ಧಿಯನ್ನು ಗಳಿಸಿವೆ. ಇವನ್ನು ದೇಶ ವರ್ಣನಾತ್ಮಕ ಕವಿತೆಗಳೆಂದು ಹೇಳಬಹುದು. ಶ್ರೀನಾಥಕವಿ ಪಲ್ನಾಡು, ರೇನಾಡು ಮೊದಲಾದ ಪ್ರಾಂತ್ಯಗಳನ್ನು ಬೊಡ್ಡುಪಲ್ಲಿ (ಕಾಟ್ರಾವುಲಪಲ್ಲಿ) ಮೊದಲಾದ ಗ್ರಾಮಗಳನ್ನು ದಕ್ಷಿಣಾಧೀಶನ ಮುತ್ತಿನ ಓಲಗ ಶಾಲೆಯನ್ನು ಒಂದೊಂದು ಪದ್ಯದಲ್ಲಿಯೇ ಬಹಳ ಸ್ಪಷ್ಟಚಿತ್ರ ಮೂಡುವಂತೆ ಹೇಳಿದ್ದಾನೆ.

	ಲೋಕಸ್ವಭಾವವನ್ನು ವರ್ಣಿಸುವ ಚಾಟುಕವಿತೆಗಳು ಅನೇಕವಾಗಿವೆ. ಕಾರ್ಯಸಾಧಕರ ಲಕ್ಷಣವನ್ನು ಒಂದು ಪದ್ಯ ನೀರೆತ್ತುವ ಏತದ ಉಪಮಾನ ಕೊಟ್ಟು ಬಣ್ಣಿಸುತ್ತದೆ. ಶಕ್ತ ತಾನು ಕೈಗೊಂಡ ಮಹತ್‍ಕಾರ್ಯವನ್ನು ಸಾಧಿಸುವುದಕ್ಕಾಗಿ ತಗ್ಗಿ ಬಗ್ಗಿ ನಡೆದುಕೊಳ್ಳುತ್ತಾನೆ; ಆದರೆ ಅಲ್ಪನಾಗುವುದಿಲ್ಲ. ಏತದ ಮರ ಬಾಗುತ್ತದೆಯಾದರೂ ಪಾತಾಳದ ನೀರನ್ನು ಬಯಲಿಗೆ ತಂದು ಚೆಲ್ಲುತ್ತದೆ.

	ಕವಿಗಳು ವಿನೋದಕ್ಕಾಗಿ ಹೊಗೆಸೊಪ್ಪು, ಅಗಸ, ಕಜ್ಜಿ, ತಿಗಣೆ, ಇಲಿ, ಬೆಕ್ಕುಗಳ ಮೇಲೆ ಪದ್ಯ ಕಟ್ಟಿರುವುದುಂಟು. ಈ ಪದ್ಯಗಳು ಕೇಳುವುದಕ್ಕೆ ಹಿತವಾಗಿವೆ. ಇವುಗಳ ಭಾವ ರಮಣೀಯವಾಗಿದೆ. ಆದರೆ ಈ ಪದ್ಯಗಳಲ್ಲಿಯೂ ವ್ಯಂಗ್ಯ, ಲೋಕವಿಡಂಬನೆ ಇಲ್ಲದೆ ಹೋಗಿಲ್ಲ.

	ಇನ್ನು ಕವಿಗಳಲ್ಲಿ ಪರಸ್ವರ ಸ್ಫರ್ಧೆ ಹುಟ್ಟಿ ಆಶುವಾಗಿ ಕವಿತೆ ಹುಟ್ಟಿರುವುದುಂಟು. ಅಷ್ಟಾವಧಾನ, ಶತಾವಧಾನಗಳಂತೂ ಆಶುಕವಿತೆಯ ಹಬ್ಬಗಳು. ಇಂದಿಗೂ ತೆಲುಗು ದೇಶದಲ್ಲಿ ಈ 'ಅವಧಾನ ಲೋಕಪ್ರಿಯವಾಗಿದೆ.

	ಕನ್ನಡದಲ್ಲಿಯೂ ಮೊದಲಿಗೆ ಆಶುಕವಿತೆ ವಿಶೇಷವಾಗಿದ್ದಿರಬೇಕೆಂದು ಊಹಿಸಲು ಕಾರಣವಿದೆ. ಆಶುಕವಿನಿಟಿಲಾಕ್ಷನೆಂಬ ಬಿರುದು ಹೊತ್ತ ಒಬ್ಬ ಮಲ್ಲಿದೇವ ಕವಿಯ ಹೆಸರು ಷಿಕಾರಿಪುರದ ಶಾಸನ ಒಂದರಲ್ಲಿ ಬಂದಿದೆ. ಕನ್ನಡ ಭಾಗವತವನ್ನು ರಚಿಸಿರುವನೆಂದು ಪ್ರಸಿದ್ಧನಾಗಿರುವ ಕವಿಗೆ ಚಾಟುವಿಠಲನೆಂಬ ಹೆಸರಿದೆ. ಆದ್ದರಿಂದ ಕನ್ನಡದಲ್ಲಿ ಚಾಟುಕವಿತ್ವ, ಆಶುಕವಿತೆರಚನೆ, ಒಂದು ಕಾಲದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ತಳಿಸಿದ್ದಿತೆಂಬುದರಲ್ಲಿ ಸಂಶಯವಿಲ್ಲ.				(ಕೆ.ವಿ.ಇ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ